ಬೆಳ್ಳಾವೆ ನರಹರಿಶಾಸ್ತ್ರಿ
1882-1961. ಪ್ರಸಿದ್ಧ ನಾಟಕಕಾರರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 21-9-1882ರಲ್ಲಿ ಜನಿಸಿದರು. ಇವರ ತಂದೆ ನರಸಾವಧಾನಿಗಳು, ತಾಯಿ ವೆಂಕಟಲಕ್ಷ್ಮಮ್ಮ. ನರಹರಿಶಾಸ್ತ್ರಿಗಳು ತುಮಕೂರಿನಲ್ಲಿಯೇ ಪ್ರೌಢಶಾಲೆಯ ಶಿಕ್ಷಣ ಮುಗಿಸುವುದರೊಂದಿಗೆ ಸಂಸ್ಕøತ, ಕನ್ನಡ ಭಾಷೆಗಳಲ್ಲಿಯೂ ಕಾವ್ಯಾಲಂಕಾರಗಳಲ್ಲಿಯೂ ಪಾಂಡಿತ್ಯಗಳಿಸಿಕೊಂಡರು. ಅನಂತರ ಶಿಕ್ಷಣ ಇಲಾಖೆ ಸೇರಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಕೋಲಾರ, ದೊಡ್ಡಬಳ್ಳಾಪುರ, ಮೇಲುಕೋಟೆ ಮುಂತಾದ ಸ್ಥಳಗಳಲ್ಲಿ ಉಪಾಧ್ಯಾಯರಾಗಿ, ಶಾಲಾ ಪರೀಕ್ಷಕರಾಗಿ ಸುಮಾರು 35 ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸಿದರು. 

	ಸಾಹಿತ್ಯದಲ್ಲಿ ಒಳ್ಳೆಯ ಅಭಿರುಚಿ ಬೆಳೆಸಿಕೊಂಡಿದ್ದ ಶಾಸ್ತ್ರಿಗಳು ಪ್ರಾಚೀನ ಕನ್ನಡ ಕಾವ್ಯಗಳ ಜೊತೆಗೆ, ಇಂಗ್ಲಿಷ್ ಭಾಷೆಯ ಅನೇಕ ನಾಟಕಗಳನ್ನು ಗಾಢವಾಗಿ ಅಭ್ಯಾಸ ಮಾಡಿದ್ದರು. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ 1919ರಲ್ಲಿ ಶ್ರೀಕೃಷ್ಣಲೀಲಾ ನಾಟಕ ಎಂಬ ನಾಟಕ ರಚಿಸಿದರು. ಗುಬ್ಬಿ ನಾಟಕ ಕಂಪನಿಯಿಂದ ಈ ನಾಟಕ ಪ್ರದರ್ಶನಗೊಂಡು ನಾಟಕಕಾರರಿಗೂ ನಾಟಕ ಕಂಪನಿಗೂ ಒಳ್ಳೆಯ ಹೆಸರು ಬಂತು. ಇದರಿಂದ ಉತ್ಸಾಹಗೊಂಡ ಶಾಸ್ತ್ರಿಗಳು ಅನೇಕ ನಾಟಕಗಳನ್ನು ರಚಿಸಿದರು. ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮಾ ಕಬೀರದಾಸ, ಜಲಂಧರ ಈ ನಾಟಕಗಳು ಗುಬ್ಬಿ ಕಂಪನಿಯಿಂದ ಪ್ರದರ್ಶನಗೊಂಡು ಜನಪ್ರಿಯವಾದುವು. 1926ರಲ್ಲಿ ವೀರಣ್ಣನವರು ಆರಂಭಿಸಿದ ಬಾಲಕಲಾವರ್ಧಿನಿ ಎಂಬ ಕಿರಿಯ ನಟರ ಸಂಘಕ್ಕೂ ನರಹರಿ ಶಾಸ್ತ್ರಿಗಳು ಶ್ರೀಕೃಷ್ಣಪಾರಿಜಾತ, ಶ್ರೀಕೃಷ್ಣಗಾರುಡಿ ನಾಟಕಗಳನ್ನು ಬರೆದುಕೊಟ್ಟರು. ಅನಂತರ ಇವರು ಬರೆದ ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಶ್ರೀಕೃಷ್ಣ ಲೀಲಾ, ಸದಾರಮೆ, ಪ್ರಭಾವತಿ ಮುಂತಾದ ನಾಟಕಗಳು ಕನ್ನಡನಾಡಿನ ಹೆಸರಾಂತ ಕಂಪನಿಗಳ ಮೂಲಕ ಪ್ರದರ್ಶನಗೊಂಡಿವೆ. 

	ಗ್ರಾಮಫೋನ್ ಕಂಪನಿಗಳಿಗೆ ಹಾಡುಗಳನ್ನು ಗ್ರಾಮಫೋನಿಗೆ ಅಳವಡುವಂತೆ ನಾಟಕಗಳನ್ನೂ ಬರೆದುಕೊಟ್ಟ ಶ್ರೇಯಸ್ಸು ಶಾಸ್ತ್ರಿಗಳದು.

	ನರಹರಿಶಾಸ್ತ್ರಿಗಳು ನಾಟಕಗಳನ್ನಲ್ಲದೆ ಕೆಲವು ಚಂಪೂ ಕಾವ್ಯಗಳ ವಿಮರ್ಶೆ ಕೂಡ ಮಾಡಿದ್ದಾರೆ. ರುದ್ರಭಟ್ಟನ ಜಗನ್ನಾಥ ವಿಜಯದ ಮೇಲೆ ಇವರು ಮಾಡಿರುವ ಸುದೀರ್ಘ ವಿಮರ್ಶೆ ಕಾವ್ಯಾಭ್ಯಾಸಿಗಳಿಗೆ ತುಂಬ ಪ್ರಯೋಜನಕಾರಿಯಾಗಿದೆ. ಇವರು ಬರೆದ ರಾಜಭಕ್ತಿ ಕಾವ್ಯ ಅಂದಿನ ಮಹಾರಾಜರ ಮೆಚ್ಚುಗೆ ಪಡೆಯಿತು. 

	ಕನ್ನಡದಲ್ಲಿ ನಾಟಕಗಳ ಅಭಾವವಿದ್ದ ಕಾಲದಲ್ಲಿ ಮನರಂಜನೆಯ ಜನಪ್ರಿಯ ನಾಟಕಗಳನ್ನು ರಚಿಸಿದ ಕೀರ್ತಿ ಶಾಸ್ತ್ರಿಗಳಿಗೆ ಸಲ್ಲುತ್ತದೆ. ಶಾಸ್ತ್ರಿಗಳು ತಮ್ಮ ನಾಟಕಗಳಲ್ಲಿ ಜನಸಾಮಾನ್ಯರ ಭಾಷೆ ಬಳಸಿದ್ದಲ್ಲದೆ, ಜೀವನದ ಆದರ್ಶ ಮೌಲ್ಯಗಳು, ಸಾಮಾನ್ಯ ಜನಜೀವನದ ಕನಸುಗಾರಿಕೆ. ಸುಖಲೋಲುಪತೆ, ಹಾಸ್ಯ ಮುಂತಾದ ಅಂಶಗಳನ್ನು ತಂದದ್ದು ಇವರ ಸಾಧನೆ. 

ಶಾಸ್ತ್ರಿಗಳಿಗೆ ಅಷ್ಟಾವಧಾನ ವಿದ್ಯೆಯಲ್ಲೂ ಪರಿಶ್ರಮವಿತ್ತು. 1923ರಲ್ಲಿ ಮೈಸೂರಿನಲ್ಲಿ ಎಂ.ವೆಂಕಟಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯೊಂದರಲ್ಲಿ ಶಾಸ್ತ್ರಿಗಳು ಅಷ್ಟಾವಧಾನ ಪರೀಕ್ಷೆ ಕೊಟ್ಟು ವಿದ್ವಜ್ಜನರ ಗೌರವಾದರ ಸಂಪಾದಿಸಿಕೊಂಡರು. ಇವರ ವಿದ್ವತ್ತು, ಪಾಂಡಿತ್ಯ, ಪ್ರತಿಭೆ ಮನಗಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ ಆಸ್ಥಾನ ವಿದ್ವಾನ್, ಕೀರ್ತನ ಕೇಸರಿ ಎಂಬ ಬಿರುದು ಕೊಟ್ಟು ಸನ್ಮಾನಿಸಿದರು. ಇವರು 21-6-1961ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ